ಭೂಷಣಭಟ್ಟ
	ಈತ ಬಾಟಭಟ್ಟನ ಮಗನೆಂದೂ ಬಾಣ ಅರ್ಧಕ್ಕೆ ನಿಲ್ಲಿಸಿದ್ದ ಆತನ ಮೇರುಕೃತಿ ಕಾದಂಬರೀ ಕಥೆಯನ್ನು ಪೂರ್ಣಗೊಳಿಸಿದನೆಂದೂ ಹೇಳಲಾಗಿದೆ. ಆದರೆ ಈತ ಗ್ರಂಥದ ಮೊದಲಾಗಲಿ ಕೊನೆಯಲ್ಲಾಗಲಿ ಎಲ್ಲಿಯೂ ತನ್ನ ಹೆಸರನ್ನು ಹೇಳಿಕೊಂಡಿಲ್ಲ. ತಂದೆಯ ಇಷ್ಟದಂತೆ ಕಥೆಯನ್ನು ಬರೆದು ಮುಗಿಸಿದುದಾಗಿ ಮಾತ್ರವೇ ಹೇಳಿದ್ದಾನೆ. ಈತ ತನ್ನ ಗ್ರಂಥವನ್ನು ತಂದೆಯ ವರ್ಷಾಬ್ದಿಯ ವೇಳೆಗೆ ಸರಿಯಾಗಿ ಬರೆದು ಮುಗಿಸಿದುದಾಗಿ ಹೇಳಿದ್ದಾನೆ. ಚಂದ್ರಾಪೀಡ ಪತ್ರಲೇಖೆಯಿಂದ ಕಾದಂಬರಿಯ ವಿಚಾರವನ್ನು ಕೇಳುವಲ್ಲಿಗೆ ಪೂರ್ವಾರ್ಧ ಮುಗಿಯುತ್ತದೆ. ಅಲ್ಲಿಂದ ಮುಂದಕ್ಕೆ ಕಥೆಯನ್ನು ಭೂಷಣಭಟ್ಟ ಆರಂಭಿಸಿ ಕಾದಂಬರೀ ಚಂದ್ರಾಪೀಡರ ಕಷ್ಟಕಾರ್ಪಣ್ಯಗಳನ್ನು ಚಂದ್ರಾಪೀಡನ ಮರಣ, ಪುನರುಜ್ಜೀವನ ಮತ್ತು ವಿವಾಹಗಳನ್ನು ಮಹಾಶ್ವೇತೆ ಪುಂಡರೀಕರ ಸಮಾಗಮವನ್ನು ವರ್ಣಿಸಿ ಕಥೆಯನ್ನು ಸುಖದಲ್ಲಿ ಕೊನೆಗಾಣಿಸಿದ್ದಾನೆ.															
(ಟಿ.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ